ತಂತುಗಟ್ಟು -
ಮುಖ್ಯವಾಗಿ ಮೂಳೆಗೆ ಸ್ನಾಯುಗಳನ್ನೂ ಇತರ ಮೂಳೆಗಳನ್ನು ಬಂಧಿಸುವ ಅಂಗಾಂಶ ಅಥವಾ ಊತಕ (ಫೈಬ್ರಸ್ ಟಿಶ್ಯೂ).  ತಂತುಗಟ್ಟುಗಳು ಬಿಳಿ ಇಲ್ಲವೇ ಹಳದಿ ನಾರೆಳೆಗಳ ಜೋಡಣೆಯಿಂದಾದ ಹುರಿಗಳು.  ದಪ್ಪಹಾಳೆಗಳು ಮತ್ತು ತೆಳುಪೊರೆಗಳು.  ನಾರೆಳೆಗಳ ನಡುವೆ ಅಪರೂಪವಾಗಿ ಒಂಟೊಂಟಿಯಾಗಿ ಇಲ್ಲವೇ ಜೋಡಿಯಾಗಿ ಜೀವಕೋಶಗಳು ಇರುವುದುಂಟು.  ಪಾಶ್ಚಾತ್ಯ ಅಂಗರಚನಾಶಾಸ್ತ್ರದಲ್ಲಿ ಎರಡು ಅಥವಾ ಹೆಚ್ಚು ಮೂಳೆಗಳನ್ನು ಪರಸ್ಪರ ಬಂಧಿಸುವ ತಂತುಗಟ್ಟಿಗೆ ಲಿಗಮೆಂಟ್ ಎಂದೂ (ಅಸ್ಥಿಹುರಿ) ಸ್ನಾಯುಗಳನ್ನು ಮೂಳೆಗೆ ಬಂಧಿಸುವ ತಂತುಗಟ್ಟಿಗೆ ಟೆಂಡನ್ ಎಂದೂ (ಸ್ನಾಯುಹುರಿ) ಮಾಂಸಖಂಡಗಳ ಮೇಲಿನ ಹೊದ್ದಿಕೆಗೆ ಡೀಪ್ ಫೇಷಿಯ ಎಂದೂ ಕೀಲು ಮತ್ತು ಇತರ ಅಂಗಗಳ ಮೇಲೆ ಕವಚದಂತೆ ಹೊದ್ದುಕೊಂಡಿರುವ ಊತಕಕ್ಕೆ ಕ್ಯಾಪ್‍ಸೂಲ್ ಎಂದೂ (ಮೇಲು ಹೊದಿಕೆ) ವಿವಿಧ ಹೆಸರುಗಳಿಂದ ಕರೆದು ವಿವರಿಸಲಾಗಿದೆ.  ಈ ಊತಕದ ಸಾಮಾನ್ಯಕ್ರಿಯೆ ಎಂದರೆ ಜಗ್ಗದ ಅಪುಟಿತ (ಇನ್‍ಇಲ್ಯಾಸ್ಟಿಕ್) ಬಿಳಿನಾರೆಗಳಿಂದಲೇ ಆಗಿವೆ.  ಅಕಸ್ಮಾತ್ ಎಳೆತದಿಂದ ನೀಳವಾದದ್ದೇ ಆದರೆ ಇವು ಮೊದಲಿನ ಉದ್ದಕ್ಕೆ ವಾಪಸಾಗದೆ ಆಕಾರ ಕೆಡುವುದೇ ನಿಜ; ಆದರೆ ಹಾಗೆ ಎಳೆತಕ್ಕೆ ಸಿಕ್ಕಿದಾಗ ಇವು ಹರಿದೋ ಕಿತ್ತೋ ಹೋಗುವುದು ಸಾಮಾನ್ಯ.  ಹೊದ್ದಿಕೆ ಅಥವಾ ಕವಚವಾಗಿರುವ ಕಡೆ ತಂತುಗಟ್ಟುಗಳು ಒಂದೇ ದಿಕ್ಕಿನಲ್ಲಿದ್ದು ಒಂದಕ್ಕೊಂದು ಅಂಟಿಕೊಂಡು ಪದರವಾಗಿರುವುದೂ ಅನೇಕ ಪದರಗಳು ಅಂಟಿಕೊಂಡು ದಪ್ಪಹಾಳೆ ಆಗಿರುವುದೂ ಒಂದೊಂದು ಪದರಜದಲ್ಲೂ ತಂತುಗಟ್ಟುಗಳು ಒಂದೊಂದು ದಿಕ್ಕಿನಲ್ಲಿರುವುದೂ ವಿವಿಧ ವಿಶೇಷ ರಚನೆಗಳು.  ಕೀಲುಗಳ ಸುತ್ತ ಪೀಪಾಯಿ ಆಕಾರದ ಹೊದ್ದಿಕೆಯಂತೆ, ಕೀಲಿನ ಆಕಾರಕ್ಕೆ ತಕ್ಕಂತೆ ಆವರಿಸಿಕೊಂಡು ಆಚೀಚೆಯ ಮೂಳೆಗಳಿಗೆ ಅಂಟಿಕೊಂಡಿರುವುದು ಕೀಲುಕವಚಗಳ ಸ್ವರೂಪ.  ಇಂಥ ತಂತುಗಟ್ಟಿನ ಹಾಳೆ ಸುಲಭವಾಗಿ ಕಿತ್ತುಹೋಗದೆ, ಹರಿದುಹೋಗದೆ ಗಟ್ಟಿಯಾಗಿರುತ್ತದೆ.  ಬಹುಪ್ರಬಲವಾದ ಜಗ್ಗಾಟದಿಂದ ಅಕಸ್ಮಾತ್ ಇದು ಹರಿದುಹೋದರೆ ಒಂದು ನೇರಗೆರೆಯಲ್ಲಿ ಅಡ್ಡವಾಗಿ ಹರಿಯದೆ ಸೊಟ್ಟಸೊಟ್ಟವಾಗಿ ಹರಿಯುತ್ತದೆ.  ಅಸ್ಥಿಹುರಿ ದುಂಡನೆಯ (ಮಂಡಿಕೀಲಿನಲ್ಲಿರುವಂತೆ) ಅಥವಾ ಚಪ್ಪಟೆಯಾದ (ಮೊಣಕೈ ಕೀಲಿನಲ್ಲಿರುವಂತೆ) ಹುರಿಯಂತಿದ್ದು ಮೂಳೆಯ ಒಂದು ಭಾಗವನ್ನು ಇನ್ನೊಂದು ಮೂಳೆಗೆ ಬಂಧಿಸುತ್ತದೆ.  ಸೇರ್ಪಡೆ ಆಗಿರುವ ದಿಕ್ಕಿನಲ್ಲಿ ಮೂಳೆಗಳು ಚಲಿಸಲಾರವು.  ಅವುಗಳ ನಡುವೆ ಅಂತರ ಹೆಚ್ಚಾಗಬಾರದು.  ಆದರೆ ಮೂಳೆಗಳು ಬೇರೆ ದಿಕ್ಕಿನಲ್ಲಿ ಸ್ವಲ್ಪಮಟ್ಟಿಗೆ ಚಲಿಸುವುದು ಸಾಧ್ಯವಿರುತ್ತದೆ.  ಬೆನ್ನುಹುರಿಯ ಲಿಗಮೆಂಟಮ್ ಎಂಬ ಕೆಲವು ಅಂಶಗಳು ಮಾತ್ರ ಹಳದಿ ನಾರೆಳೆಗಳಿಂದ ಆದವು.  ಇವು ಎಳೆತಕ್ಕೆ ಸಿಕ್ಕಿದಾಗ ನೀಳವಾಗಿ ಮತ್ತೆ ಎಳೆತವಿಲ್ಲದಾಗ ಸಹಜ ಉದ್ದಕ್ಕೆ ಹಿಂತಿರುಗುತ್ತವೆ.  ನಾವು ಮುಂಬಾಗಿದಾಗ ಇವು ಲಂಬಿಸಿದ್ದು ಮುಂಬಾಗಿಸುವ ಸ್ನಾಯುಗಳು ಸಂಕೋಚನ ಬಳಿಕ ತಮ್ಮ ಪುಟಿತತೆಯಿಂದ ಚಿಕ್ಕದಾಗುತ್ತವೆ.  ನೆಟ್ಟಭಂಗಿಗೆ ವಾಪಸಾಗುವುದು ಇದರಿಂದ ಪ್ರಾರಂಭವಾದ ಲೆಕ್ಕ. ಸಂಬಂಧಪಟ್ಟ ಸ್ನಾಯುಗಳು ಇನ್ನು ಮುಂದೆ ಪರಿಣಾಮಕಾರಿಯಾಗಿ ಸಂಕೋಚಿಸಿ ನಾವು ನೆಟ್ಟಗೆ ನಿಲ್ಲುವಂತೆ ಮಾಡುವುದಕ್ಕೆ ಇದು ಸಹಕಾರಿ.  ಹೆಕ್ಕತ್ತಿನ ಹುರಿಯೂ (ನೇಪ್ ಆಫ್ ದಿ ನೆಕ್) ಪುಟಿತತೆ ಇರುವಂಥ ಹಳದಿ ನಾರೆಳೆಗಳಿಂದಾದುದು.  ಭಾರ ಎಳೆಯಲು ಬಳಸುವ ಪ್ರಾಣಿಗಳಲ್ಲಿ ಇದು ನೊಗದ ಭಾರವನ್ನು ಹೊರುವ ಭಾಗ.  ಭಾರ ಹೇರಿದ್ದಾಗ ನೀಳವಾಗಿ ಭಾರ ಇಳಿಸಿದಾಗ ಸಹಜ ಉದ್ದಕ್ಕೆ ಹಿಂತಿರುಗುತ್ತದೆ.  ಹೆಕ್ಕತ್ತಿನಲ್ಲಿ ಇಂಥ ಪುಟಿತತೆ ಇರುವ ತಂತುಗಟ್ಟು ಇರುವುದರಿಂದ ಈ ಪ್ರಾಣಿಗಳು ಉಪಯುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.

	ಸ್ನಾಯು ತಂತುಗಳು, ಸ್ನಾಯುವಿನ ತುದಿಯಲ್ಲಿ ಬಂಧಿಸುವ ಅಂಗಾಂಶ ತಂತುಗಳಾಗಿ ಮಾರ್ಪಡುತ್ತವೆ.  ಇವೂ ಮಾಂಸಖಂಡದ ಮೇಲುಹೊದ್ದಿಕೆಯೂ ಸೇರಿ ಸ್ನಾಯುಹುರಿಯಾಗಿ ಮುಂದುವರಿದು ಕೀಲಿನ ಆಚೆಯ ಮೂಳೆಗೆ ಅಂಟಿಕೊಂಡಿರುತ್ತದೆ.  ಸ್ನಾಯುಹುರಿಗಳು ಅಸ್ಥಿಹುರಿಗಳಷ್ಟು ಬಲವಾಗಿರುವುದಿಲ್ಲ. ಬಲವಾದ ಜಗ್ಗಾಟದಿಂದ ಸ್ನಾಯುಹುರಿಗಳು ಅಕಸ್ಮಾತ್ ಕಿತ್ತುಹೋದರೆ ಹುರಿಯ ತಂತುಗಳೆಲ್ಲ ಅಡ್ಡವಾಗಿ ಒಂದೇ ನೇರದಲ್ಲಿ ಛಿದ್ರಿಸುತ್ತದೆ.  ಆದರೆ ಅಸ್ಥಿಹುರಿಗಳು ಕಿತ್ತುಹೋದಾಗ, ತಂತುಗಟ್ಟು ಹಾಳೆಗಳಲ್ಲಿಯಂತೆಯೇ ಅಡ್ಡಾದಿಡ್ಡಿಯಗಿ ಛಿದ್ರಿಸಿರುತ್ತವೆ.  ಹೀಗೆ ಕಿತ್ತುಹೋಗುವ ಮುನ್ನ ಮತ್ತು ಕಿತ್ತುಹೋದಮೇಲೆ ಬಲು ನೋವಾಗುತ್ತದೆ.  ಸ್ಥಳೀಯ ರಕ್ತಸ್ರಾವದಿಂದ ಊದಿಕೊಳ್ಳಲೂಬಹುದು.  ಛಿದ್ರತೆಯಿಂದ ಬಂಧನಕ್ರಿಯೆಗೆ ಧಕ್ಕೆಯಾಗುವುದರಿಂದ ಬಂಧಿತ ಭಾಗಗಳ ಸ್ಥಳಪಲ್ಲಟ ಆಗಿರಬಹುದು.  ಇದೇ ಉಳುಕು (ಸ್ಟ್ರೇಯ್ನ್).  ಆದರೆ ತಂತುಗಟ್ಟುಗಳು ಹರಿಯುವುದಕ್ಕೆ ಮುನ್ನ ನೋವು ಉಂಟಾಗುವ ವೇಳೆಗೆ ಅವು ಎಷ್ಟು ಎಳೆತವನ್ನು ತಡೆದುಕೊಂಡಾವು ಎನ್ನುವುದು ಸಂದಿಗ್ಧ ಪ್ರಶ್ನೆ.  ಹಲವು ತಂತುಗಟ್ಟುಗಳು ಆಶ್ಚರ್ಯಪಡುವಷ್ಟು ಬಲಯುತವಾದವು.  ತೊಡೆಕೀಲಿನ ಮುಂದೆ ಬಿಜೋಮಿನ ಲಿಗಮೆಂಟ್ ಎಂಬ ತಂತುಗಟ್ಟು ಇದೆ.  ಇಕ್ಕೆಲಗಳಲ್ಲೂ ಇರುವ ಈ ತಂತುಗಟ್ಟುಗಳು ನಾವು ನೆಟ್ಟಗೆ ನಿಂತಾಗ ಸೊಂಟ ನೇರದಲ್ಲಿ ಹಿಂದಕ್ಕೆ ಬಾಗಿಹೋಗದಂತೆ ತಡೆಯುತ್ತವೆ.  ಆದ್ದರಿಂದ ಅವು ಅಗಾಧ ಬಲಯುತವಾಗಿರಬೇಕಲ್ಲದೆ ಅವಕ್ಕೆ ದೀರ್ಘಕಾಲಿಕವಾಗಿ ಎಳೆತವನ್ನು ತಡೆದುಕೊಳ್ಳುವ ಸಾಮಥ್ರ್ಯವೂ ಇರಬೇಕು ಎನ್ನುವುದು ವ್ಯಕ್ತ.  ತಂತುಗಟ್ಟಿನ ಈ ಕ್ರಿಯೆ ದೀರ್ಘಕಾಲಿಕ ಸ್ನಾಯು ಸಂಕೋಚನವನ್ನು ತಪ್ಪಿಸಿದಂತಾಗಿದೆ.  ಏಕೆಂದರೆ ಈ ತಂತುಗಟ್ಟುಗಳು ಇಲ್ಲದಿದ್ದರೆ ಸ್ನಾಯುಗಳ ದೀರ್ಘಕಾಲಿಕ ಸಂಕೋಚನದಿಂದ ಮಾತ್ರ ನಾವು ಸೊಂಟಮಟ್ಟದಲ್ಲಿ ಹಿಂದಕ್ಕೆ ಉರುಳಿಕೊಳ್ಳದಂತೆ ನೆಟ್ಟಗೆ ನಿಲ್ಲಲು ಸಾಧ್ಯವಾಗುತ್ತಿತ್ತು.  ಮಂಡಿಯನ್ನು ಮಡಿಚಿಕೊಂಡು ಪುನಃ ನೆಟ್ಟಗೆ ಮಾಡಲು ತಕ್ಕ ಸ್ನಾಯುಗಳು ಸಂಕೋಚಿಸಬೇಕು.  ನೆಟ್ಟಗೆ ನಿಂತಾಗ ಮಂಡಿ ಮುದುರಿಕೊಳ್ಳದೆ ನಿಲುವು ಸ್ಥಿರವಾಗಿರಲು ಸ್ನಾಯುಗಳು ಅಗಾಧ ಶ್ರಮವಹಿಸಬೇಕಾಗುತ್ತಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.  ಆದರೆ ನಿಸರ್ಗ ಈ ಶ್ರಮವನ್ನು ತಪ್ಪಿಸಿದೆ.  ಸೂಕ್ತ ತಂತುಗಟ್ಟುಗಳು ಕೀಲಿಗೆ ಬೀಗಹಾಕಿದಂತೆ ಮಾಡಿ ಅದರ ಚಲನೆಯನ್ನು ತಾತ್ಕಾಲಿಕವಾಗಿ ತಡೆದಿರುತ್ತವೆ.  ಇದರಿಂದ ಸ್ನಾಯುಗಳ ದೀರ್ಘಕಾಲಿಕ ಸಂಕೋಚನ ಅನಗತ್ಯವಾಗುವುದು.  ಹೀಗೆ ಬೀಗಹಾಕಿದಂತೆ ಮಾಡಲು ಮಂಡಿಕೀಲಿನಲ್ಲಿ ಸಂಬಂಧಪಟ್ಟ ತಂತುಗಳು ಬಹುಬಿಗಿಯಾದ ಎಳೆತವನ್ನು ತಡೆದುಕೊಳ್ಳಲು ಸಮರ್ಥವಾಗಿರಬೇಕು.  ತಂತುಗಟ್ಟುಗಳು ಸ್ನಾಯುಗಳಿಗೆ ಬೆಂಬಲವಾಗಿರುವಂತೆ ಅದಕ್ಕೆ ವಿಪರ್ಯಾಯವಾಗಿ ಸ್ನಾಯುಗಳು ತಂತುಗಟ್ಟುಗಳಿಗೆ ಬೆಂಬಲವಾಗಿರುವುದೂ ಉಂಟು.  ತಂತುಗಟ್ಟುಗಳು ಎಷ್ಟು ಎಳೆತಕ್ಕೆ ಒಳಪಡಬೇಕೋ ಅಷ್ಟು ಮಾತ್ರಕ್ಕೆ ನಿಗದಿಯಾಗಿರುವಂತೆ ಸ್ನಾಯುಗಳು ನಿರಂತರ ಹಾಗೂ ಅನೈಚ್ಛಿಕ ಕಿಂಚಿತ್ ಸಂಕೋಚನದಿಂದ (ಟಾನಿಕ್ ಕನ್‍ಟ್ರಾಕ್ಷನ್) ಏರ್ಪಟ್ಟಿದೆ.  ಹಠಾತ್ತಾಗಿ ತಂತುಗಟ್ಟಿನ ಮೇಲಿನ ಎಳೆತ ಹೆಚ್ಚಾದರೆ ತತ್‍ಕ್ಷಣವೇ ಐಚ್ಛಿಕ ಸ್ನಾಯುಗಳೂ ಅನೈಚ್ಛಿಕವಾಗಿ ತಾವಾಗಿಯೇ ಸಂಕೋಚಿಸಿ ತಂತುಗಟ್ಟುಗಳು ಹರಿಯದಂತೆ ಕಾಪಾಡುತ್ತವೆ.  ಎಳೆತ ಅತಿ ಅಧಿಕವಾಗಿದ್ದರೆ ಅಥವಾ ದೀರ್ಘಕಾಲಿಕವಾಗಿದ್ದರೆ ಅದನ್ನು ತಂತುಗಟ್ಟುಗಳೇ ತಡೆಯಬೇಕಾದ್ದು ಅನಿವಾರ್ಯ.  ಆಗಲೇ ಅವು ಹರಿದುಹೋಗುವುದು.	
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ